Search

‘ಕಸಮುಕ್ತ ಬೆಂಗಳೂರು’ ಮಾಡುವಲ್ಲಿ ನಾಗರಿಕರ ಮೇಲ್ವಿಚಾರಣೆ!

– ಪೂರ್ಣಿಮಾ ಜಿ. ಆರ್, ಪ್ರೋಗ್ರಾಮ್ ಆಫೀಸರ್

ನಾಗಲೋಟದಂತೆ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಘನತ್ಯಾಜ್ಯವನ್ನು ನಿರ್ವಹಿಸುವುದು ಬಹಳ ಕಷ್ಟಸಾಧ್ಯ. ಅಸಮರ್ಪಕ ತ್ಯಾಜ್ಯ ನಿರ್ವಹಣೆ ಎಂಬ ವಿಷಯವು ಇತ್ತೀಚಿನ ದಿನಗಳಲ್ಲಿ ಎಲ್ಲಿಲ್ಲಿಯೂ ಕೇಳಿ ಬರುತ್ತಿರುವ ಒಂದು ಗಂಭೀರ ಸಮಸ್ಯೆ. ನಗರವು ಬೆಳೆದಂತೆಲ್ಲಾ ಕಸದ ಸಮಸ್ಯೆಯು ಸಹ ಹೆಚ್ಚುತ್ತಿದೆ. ಮನೆಗಳಿಂದ ಕಸ ಸಂಗ್ರಹವನ್ನು ಮಾಡುತ್ತಿದ್ದರೂ ಸಹ ಖಾಲಿ ಜಾಗಗಳಲ್ಲಿ, ರಸ್ತೆ ಬದಿಗಳಲ್ಲಿ, ಆಸ್ಪತ್ರೆ ಹತ್ತಿರ, ಪಾರ್ಕ್ ಹತ್ತಿರ ಸಾರ್ವಜನಿಕರು ಕಸವನ್ನು ಹಾಕುತ್ತಿರುವುದನ್ನು ಕಾಣಬಹುದಾಗಿದೆ. ಈ ಸಮಸ್ಯೆಗಳನ್ನು ನಿತ್ಯವೂ ನೋಡುತ್ತಿದ್ದರೂ ಸಹ ಸುಧಾರಣೆಯ ವಿಷಯ ಮಾತ್ರ ದೂರ ಉಳಿದಿದೆ. ಇದಲ್ಲದೆ ರಸ್ತೆ ಮತ್ತು ಪಾದಚಾರಿ ಬದುಗಳಲ್ಲಿ ಗುಡ್ಡೆ ಹಾಕಿದ ಕೊಳೆತ ಕಸ, ಹಳಸಿದ ತ್ಯಾಜ್ಯ ಆಹಾರ ಪದಾರ್ಥ, ಪ್ಲಾಸ್ಟಿಕ್ ಮುಂತಾದವುಗಳ ನಡುವೆ ದಾರಿ ಮಾಡಿಕೊಂಡು ಓಡಾಡಬೇಕಾದ ಪರಿಸ್ಥಿತಿಯಂತೂ ನೋಡುಗರಿಗೆ ಬಹಳ ಮುಜುಗರವನ್ನು ಉಂಟುಮಾಡುತ್ತಿದೆ. ಈ ಕೊಳೆತ ಆಹಾರವು ಪ್ರಾಣಿಗಳನ್ನು ಆಕರ್ಷಿಸುವುದರಿಂದ ರಸ್ತೆ ಸಂಚಾರಕ್ಕೂ ಸಹ ತೊಂದರೆಯಾಗಿದೆ. ಈ ಬವಣೆಗೆ ಎಲ್ಲಾ ನಾಗರಿಕರೂ ಒಳಗಾಗುತ್ತಾರೆ. ಅದರಲ್ಲೂ ಕಸವನ್ನು ಸಂಗ್ರಹಿಸುವ ಸ್ಥಳದ ಹತ್ತಿರದಲ್ಲಿ ಮನೆಯಿದ್ದವರ ಪಾಡಂತೂ ಇನ್ನೂ ಶೋಚನೀಯವಾಗಿರುತ್ತದೆ.

ಇನ್ನೊಂದೆಡೆ ಈ ರೀತಿ ಕಸವನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕುವುದರಿಂದ ಅದರ ವಿಂಗಡಣೆಯು ಸಹ ಕಷ್ಟಸಾಧ್ಯ. ಇದರಿಂದ ಗಾಳಿ, ನೀರು ಮತ್ತು ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ಈ ವಿಷಯದ ಸಲುವಾಗಿ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಪ್ರಯತ್ನವನ್ನು ಹಲವಾರು ನಾಗರಿಕರು, ಸಂಘ ಸಂಸ್ಥೆಗಳು ಮತ್ತು ಸರ್ಕಾರ ಮಾಡುತ್ತಾ ಬಂದಿದೆ. ಆದರೂ ಸಹ ಕಸಮುಕ್ತ ಬೆಂಗಳೂರು ಕನಸನ್ನು ನನಸು ಮಾಡಲು ಸಾಧ್ಯವಾಗುತ್ತಿಲ್ಲ. ಇದರ ಪ್ರಮುಖ ಕಾರಣಗಳು ಸಾರ್ವಜನಿಕರು ವೈಯಕ್ತಿಕ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಹಿಂಜರಿಯುತ್ತಿರುವುದು ಹಾಗೂ ಬಿಬಿಎಂಪಿಯು ಸರಿಯಾದ ಶಿಸ್ತುಬದ್ಧ ಕ್ರಮವನ್ನು ತೆಗೆದುಕೊಳ್ಳದೆ ಇರುವುದು ಸಹ ಆಗಿರಬಹುದು. ಬಿಬಿಎಂಪಿಯು ಕಸ ಸಂಗ್ರಹಿಸಲು ಮಾಡಿರುವ ವ್ಯವಸ್ಥೆಯನ್ನು ಸರಿಯಾಗಿ ಬಳಸಿ ಮತ್ತು ಅದನ್ನು ಮೇಲ್ವಿಚಾರಣೆ ಮಾಡುತ್ತಾ ಬಂದರೆ ಹಾಗೂ ಈ ನಿಟ್ಟಿನಲ್ಲಿ ನಾಗರಿಕರೂ ಸಹ ಜವಾಬ್ದಾರಿಯಿಂದ ವರ್ತಿಸಿದರೆ ಕಸದ ಸಮಸ್ಯೆಯನ್ನು ಬಗೆಹರಿಸುವತ್ತಾ ಒಂದು ಉತ್ತಮ ಪ್ರಯತ್ನವನ್ನು ಮಾಡಬಹುದು.

ಈ ನಿಟ್ಟಿನಲ್ಲಿ ಹೆಜ್ಚೆ ಇಟ್ಟಿರುವ ಪಬ್ಲಿಕ್ ಅಫೇರ್ಸ್ ಸೆಂಟರ್, ಬೆಂಗಳೂರಿನಲ್ಲಿ ಕಸದ ಸಮರ್ಥ ಸಂಗ್ರಹವನ್ನು ಖಚಿತಪಡಿಸಿಕೊಳ್ಳಲು ಸಂಶೋಧನೆಯನ್ನು ಕೈಗೊಂಡು, ಅದನ್ನು ಕಾರ್ಯರೂಪಕ್ಕೆ ತರುವತ್ತಾ ಹೆಜ್ಜೆಯನ್ನಿಟ್ಟಿದೆ. ಕಸದ ಸಂಗ್ರಹದ ಬಗ್ಗೆ ನಾಗರಿಕರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ, ಕಸದ ಸಂಗ್ರಹದ ಮೇಲ್ವಿಚಾರಣೆಯಲ್ಲಿ ನಾಗರಿಕರೂ ಸಹ ಭಾಗಿಯಾಗಲು ಅನುಕೂಲವಾಗುವಂತೆ ಪಿಎಸಿಯು ‘ಪ್ಯಾಕ್ ವೆಸ್ಟ್ ಟ್ರ್ಯಾಕರ್ ‘ ಎಂಬ ಮೊಬೈಲ್ ಆ್ಯಪ್‍ನ್ನು ಅಭಿವೃದ್ಧಿ ಪಡಿಸಿದೆ. ಇದು ಸ್ವಯಂಸೇವೆಕರು ಭಾಗವಹಿಸುವಿಕೆಯ ಒಂದು ಪ್ರಕ್ರಿಯೆಯಾಗಿದ್ದು, ಬಿಬಿಎಂಪಿಯು ಕಸಸಂಗ್ರಹಿಸುವ ಪ್ರಕ್ರಿಯೆಯನ್ನು ಆ ಸ್ಥಳದಲ್ಲಿಯೇ ನಿಂತು ಗಮನಿಸಿ ಅದಕ್ಕೆ ಸಂಬಂಧಿಸಿದ ಸರಳ ಪ್ರಶ್ನೆಗಳನ್ನು ಆನ್‍ಲೈನ್ ಮೂಲಕ ಉತ್ತರಿಸುವ ಪ್ರಕ್ರಿಯೆಯಾಗಿದೆ. ಸ್ವಯಂಸೇವಕರು ಕಳಿಸಿದ ಉತ್ತರಗಳನ್ನು ಅಧಿಕಾರಿಗಳು ಅಥವಾ ವಾರ್ಡ್‍ನ ಕಾರ್ಪೊರೇಟರ್ ಅವರ ಕಛೇರಿಯಲ್ಲಿ ಕುಳಿತು ನೋಡಬಹುದು ಹಾಗೆಯೇ ಅದಕ್ಕೆ ತಕ್ಕ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬಹುದು. ಈ ಆ್ಯಪ್‍ನಲ್ಲಿ ಕಸ ಸಂಗ್ರಹಕ್ಕೆ ಸಂಬಂಧಿಸಿದಂತಹ ಕೆಲವೇ ಕೆಲವು ಮೂಲಭೂತ ಪ್ರಶ್ನೆಗಳನ್ನು ಕೇಳಲಾಗಿದೆ. ಉದಾ: ಕಸ ತೆಗೆದುಕೊಂಡು ಹೋಗುವ ಲಾರಿಯು ಕಸವನ್ನು ತೆಗೆದುಕೊಂಡು ಹೋಗುವ ಜಾಗಕ್ಕೆ ಬಂದಿದೆಯೇ, ಯಾವ ವೇಳೆಯಲ್ಲಿ ಕಸವನ್ನು ತೆರವುಗೊಳಿಸಲಾಯಿತು, ಕಸವನ್ನು ಬೇರ್ಪಡಿಸಿದ್ದಾರೆಯೇ, ಕಸವನ್ನು ಪೂರ್ಣವಾಗಿ ಸಂಗ್ರಹಿಸಲಾಗಿದೆಯೇ ಅಥವಾ ಸುಡಲಾಗಿದೆಯೇ, ಕಸವನ್ನು ವಿಲೇವಾರಿ ಮಾಡುವಾಗ ಏನಾದರೂ ತೊಂದರೆಯಾಗಿದೆಯೇ? ಎಂಬ ಪ್ರಶ್ನೆಗಳನ್ನು ಕೇಳಲಾಗಿದೆ. ಈ ಪ್ರಶ್ನೆಗಳಿಗೆ ಸ್ವಯಂಸೇವಕರು/ನಾಗರಿಕರು ನೀಡಿದ ಉತ್ತರಗಳನ್ನು ಅಧಿಕಾರಿಗಳು/ವಾರ್ಡ್‍ನ ಕಾರ್ಪೋರೇಟರ್‍ಗಳು ತಮ್ಮ ಕಛೇರಿಯಲ್ಲಿ ನೋಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಕಛೇರಿಗೆ ಬಂದ ಮಾಹಿತಿಯ ಆಧಾರದ ಮೇಲೆ ಸಿಬ್ಬಂದಿಗಳು ಕಸವನ್ನು ತೆರವುಗೊಳಿಸದೆ ಇದ್ದಂತಹ ಸ್ಥಳಗಳ ಬಗ್ಗೆ ಪೌರಕಾರ್ಮಿಕರಿಗೆ ಕಸವನ್ನು ತೆರವುಗೊಳಿಸಲು ಸೂಚಿಸಬಹುದು, ಕಸವನ್ನು ಸರಿಯಾಗಿ ವಿಂಗಡಿಸದ ಇದ್ದಲ್ಲಿ ನಾಗರಿಕರಿಗೆ ಅದರ ಬಗ್ಗೆ ಅರಿವನ್ನು ಮೂಡಿಸುವ ಕೆಲಸವನ್ನು ಸಹ ಮಾಡಬಹುದು.

ಈ ಮೊಬೈಲ್ ಆ್ಯಪ್ ಪಿಎಸಿಯು ಜಾರ್ಜಿಯಾದ ಎಲ್ವಾ ಎಂಬ ಸಂಸ್ಥೆಯ ಸಹಯೋಗದೊಂದಿಗೆ 2013ರಲ್ಲಿ ಮೊಬೈಲ್ ಸಂದೇಶದ(ಎಸ್‍ಎಂಎಸ್) ಮೂಲಕ ನಾಗರಿಕರ ಅನುಭವಗಳನ್ನು ಪಡೆಯುವ ಒಂದು ಪ್ರಾಯೋಗಿಕ ಯೋಜನೆಯ ಆಧಾರದ ಮೇಲೆ ಅಭಿವೃದ್ಧಿ ಪಡಿಸಲಾಗಿದೆ. ಈ ಪ್ರಯತ್ನವನ್ನು ಉನ್ನತೀಕರಿಸಿ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಿದ್ದು, ಪ್ರಸ್ತುತದಲ್ಲಿ ಆಂಡ್ರಾಯಿಡ್ ಮೊಬೈಲ್‍ಗಳಲ್ಲಿ ಲಭ್ಯವಿದೆ. ಪ್ರಸ್ತುತದಲ್ಲಿ ಈ ‘ಪ್ಯಾಕ್ ವೆಸ್ಟ್ ಟ್ರ್ಯಾಕರ್’ ಆ್ಯಪ್‍ನ್ನು 5 ವಾರ್ಡ್‍ಗಳಲ್ಲಿ (ವಿಜ್ಞಾನ ನಗರ, ಆಜಾದ್‍ನಗರ, ರಾಜಾಜಿನಗರ, ಎ.ನಾರಾಯಣಪುರ ಮತ್ತು ಪ್ರಕಾಶ್‍ನಗರ) ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗಿದೆ. ‘‘ಪ್ಯಾಕ್ ವೆಸ್ಟ್ ಟ್ರ್ಯಾಕರ್’ನ ಬಗ್ಗೆ ಹೆಚ್ಚಿನ ಮಾಹಿತಿಯನ್ನು www.pacwastetracker.org ಪಡೆಯಬಹುದು. ಈ ಆ್ಯಪ್‍ನ್ನು ಆನ್‍ಡ್ರೈಡ್ ಮೊಬೈಲ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್‍ಲೋಡ್ ಮಾಡಬಹುದು.

ಕಸದ ನಿರ್ವಹಣೆ, ಸಂಗ್ರಹ, ಸಾಗಣೆ ಮತ್ತು ವಿಲೇವಾರಿಯು ಬಹು ದೀರ್ಘಾಕಾಲಿಕ ಪ್ರಕ್ರಿಯೆಯಾಗಿದ್ದು ಇದರ ನಿರ್ವಹಣೆಯ ಪ್ರತಿ ಹಂತದಲ್ಲಿಯೂ ಸಹ ಮೇಲ್ವಿಚಾರಣೆಯ ಅವಶ್ಯಕತೆ ಇದೆ. ಸುಂದರ ಪರಿಸರವನ್ನು ನಿರ್ಮಿಸುವುದು ಎಲ್ಲಾ ನಾಗರಿಕರ ಜವಾಬ್ದಾರಿಯಾಗಬೇಕು. ಕಸಮುಕ್ತ ಬೆಂಗಳೂರು ಮಾಡುವ ಕನಸನ್ನು ಹೊತ್ತಿರುವ ಬೆಂಗಳೂರು ಮಹಾನಗರ ಪಾಲಿಕೆಗೆ ಕಸದ ಸಮಸ್ಯೆಯನ್ನು ಬಗೆಹರಿಸುವಲ್ಲಿ ನಾಗರಿಕರೂ ಸಹ ಕೈ ಜೋಡಿಸಬೇಕು. ತ್ಯಾಜ್ಯ ನಿರ್ವಹಣೆಯು ಒಂದು ಸಮಗ್ರ ವಿಷಯವಾಗಿದ್ದು ಪ್ರತಿ ಹಂತದಲ್ಲಿಯೂ ಸರ್ಕಾರ ಮತ್ತು ನಾಗರಿಕರು ಜವಾಬ್ದಾರಿಯುತವಾಗಿ ಹಾಗೂ ಜಾಗರೂಕತೆಯಿಂದ ತಮ್ಮ ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ನಿರ್ವಹಿಸಿದರೆ ‘ಕಸಮುಕ್ತ ಬೆಂಗಳೂರನ್ನು’ ಎಲ್ಲರೂ ನೋಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ‘‘ಪ್ಯಾಕ್ ವೆಸ್ಟ್ ಟ್ರ್ಯಾಕರ್’ ಕಸದ ನಿರ್ವಹಣೆಯ ಬಗ್ಗೆ ಒಂದು ನಾಗರಿಕರ ಮೇಲ್ವಿಚ್ಛಾರಣೆಯ ಸಾಧನವಾಗಬಹುದು ಎಂಬ ಅನಿಸಿಕೆ ನಮ್ಮದು. ಮನಸ್ಸಿದ್ದರೆ ಮಾರ್ಗ ಎಂಬಂತೆ ಸರ್ಕಾರ ಮತ್ತು ನಾಗರಿಕರು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸದಲ್ಲಿ ಈ ಸಮಸ್ಯೆಯಿಂದ ಹೊರಬರಲು ಸಾಧ್ಯ!

Please follow and like us:Leave a Reply

Your email address will not be published. Required fields are marked *

Facebook
Twitter
YOUTUBE
LINKEDIN